Monday, December 25, 2017

ಹೃದಯ ಭಾವಗೀತೆ

ಅಂತರಂಗದ ಕನಸು ಚೆಲ್ಲುವ
ಹಂಸರಾಗವು ಭಾವವು |
ಕಂಠದಲಿ ಮನ್ಮಥನ ಬೆರಗನು
ತಂದು ಕುಣಿವುದು ಗೀತವು ||

ಬೆಳೆಯುತಿರೆ ಕನಸೆಂಬ ಗೊಂಚಲು
ಭಾವ ತಣಿಯದೆ ಹರಿವುದು |
ಗುನುಗುನುತ ಮೆಲುದನಿಯು ಸೇರಲು
ಗೀತೆಯೆದೆಯೊಳಗುಲಿವುದು ||

ತೋಷ ನೀಡುತ ಕ್ಲೇಷ ಕಳೆವುದು
ಭಾವಗೀತೆಯ ಕೆಚ್ಚಲು |
ಇಷ್ಟೆನಗೆ ಸಾಕಲ್ತೆ ಜನುಮದಿ
ಹೃದಯರಾಗವ ಮೆಚ್ಚಲು ||

••ಸಹೆ

ಹಸಿ ಬಿಸಿಯ ಮುತ್ತು

ಹಸಿಯಾದ ಕೇಶಗಳ ಬಿಳಿಪಂಜಿಯಲಿ ಸುತ್ತಿ
ಹೊಸತಾದ ಸೀರೆಯನು ಮೈಗೆ ತೊಟ್ಟು |
ಹುಸಿಯಿರದ ನೋಟದಲಿ ಕನಸುಗಳ ಕಸಿಮಾಡಿ
ಬಿಸಿಮಾಡಿದಳು ಕೆನ್ನೆ ಮುತ್ತನಿಟ್ಟು ||

••ಸಹೆ

ಬಾ ಎದೆಯ ಬನಕೆ

ನನ್ನೆದೆಯ ಬನದೊಳಗೆ ನಗುತಲರಳುತ ಬಾರೆ
ಎಲೆಯ ಮರೆಯಲಿ ಹೊರಳೊ ದುಂಡು ಮಲ್ಲೆ |
ಘಮ್ಮೆನುವ ಗಂಧಕ್ಕೆ ಕಾದುಕುಳಿತಿಹಳಿಲ್ಲಿ
ಮಿಂದು ಹೆರಳನು ಹರಡಿ ಚೆಲುವ ನಲ್ಲೆ ||

••ಸಹೆ

ವಿರಹ ಶಮನ

ಇಪ್ಪತ್ತು ದಿನಗಳಾಗಿಹುದು ತಿಂಗಳಮೇಲೆ
ಕಾದಿಹಳು ನನಗಾಗಿ ಚೆಲುವೆಯಲ್ಲೆ |
ಬಿಡಿಮಲ್ಲೆಗಳ ಬಾಳೆನಾರಿನಲಿ ಪೇರಿಸಿದ
ಮಾಲೆ ಕೊಂಡೊಯ್ಯುವೆನು ನಗಲಿ ನಲ್ಲೆ ||

••ಸಹೆ

ಮಲ್ಲಿಗೆಯ ಘಮಲು

ಎಷ್ಟು ತಂಪಿರಲೇನು ಕೆಂಡಸಂಪಿಗೆ ಕಂಪು
ಮಲ್ಲಿಗೆಯ ಘಮಕುಂಟೆ ಸರಿಸಾಟಿಯು?
ಮನದಲ್ಲಿ ಮೊಗ್ಗಾಗುತೆದೆಯಲ್ಲಿ ಬಿರಿಯುತಿಹ
ಕನಸುಗಳ ಮೆದುತನದಲಿರದೆ ಸುಧೆಯು?

••ಸಹೆ

ಹನುಮನ ನೆನೆಯಲು...

ಸೀತೆಯ ಹುಡುಕಿದ ಹನುಮನ ಭಜಿಸಲು
ಹುಡುಗಿಯ ತಾಪತ್ರಯವಿಲ್ಲ |ಲಂಕೆಯ ಗಡಗಡವೆನಿಸಿದ ಹನುಮನನೆನೆಯಲು ಹೆಂಡತಿ ಭಯವಿಲ್ಲ ||
••ಸಹೆ

ನಿಪುಣೆ

ಕೇಶಗಳು ಭುಜದೆರಡುಕಡೆಗಾಗುವಂದದಲಿ
ಹರಡಿಹಳು ವಿನ್ಯಾಸಗಳ ನಿಪುಣೆಯು |
ಒಂದು ಮಾರಿನ ಮಾಲೆ ಮೂರು ಮಡಿಕೆಯಲಿಟ್ಟು
ಸೂಡಿಸುವುದಭ್ಯಾಸ ಪ್ರತಿಬಾರಿಯು ||

••ಸಹೆ